ದಿನಾಂಕ: 12 May 2013

ಈ ಹೊತ್ತಿಗೆ-7 :

ಮಿತ್ರಾ ವೆಂಕಟ್ರಾಜ್ ಅವರ ‘ಮಾಯಕದ ಸತ್ಯ’

‘ಈ ಹೊತ್ತಿಗೆ’-7ರ(ದಿನಾಂಕ 12 May 2013) ಓದು, ಚರ್ಚೆ,ಅತ್ಯಂತ ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ಮಿತ್ರಾ ವೆಂಕಟ್ರಾಜ್ ಅವರ ‘ಮಾಯಕದ ಸತ್ಯ’ದಲ್ಲಿನ ಕತೆಗಳು.

ದಿನಾಂಕ: 12 May 2013

ಸಮಯ: ಸಂಜೆ 4.30

ಸ್ಥಳ: ‘ಸಿರಿಸಂಪಿಗೆ’,
#40, 34ನೇ ಅಡ್ಡರಸ್ತೆ,
11ನೇ ಮುಖ್ಯರಸ್ತೆ,
ಜಯನಗರ 4th T block,
ಬೆಂಗಳೂರು.

*ಜಯನಗರದ 4th blockನ cool joint ಸಿಗ್ನಲ್ ನಂತರದ signal (towards JP Nagar) ದಾಟಿದ ಮೇಲೆ, ನಿಮ್ಮ ಎಡಕ್ಕೆ 34thಕ್ರಾಸಲ್ಲಿ ತಿರುಗಿಕೊಂಡರಾಯಿತು. ನಾಲ್ಕು ಹೆಜ್ಜೆ ಮುಂದೆ ಬಂದರೆ ಬಲಗಡೆಗೆ ಈ ಮನೆ ಇದೆ.

ನೀವೂ ಭಾಗವಹಿಸಿದರೆ ಹೆಚ್ಚು ಖುಷಿ. 🙂 ಬರ್ತೀರಲ್ವಾ ಅಂತ ಕೇಳ್ತಿಲ್ಲ, ಬನ್ನಿ ಅಂತಿದೀವಿ. 🙂

‘ಈ ಹೊತ್ತಿಗೆ’-7ರ(ದಿನಾಂಕ 12 May 2013) ಮಿತ್ರಾ ವೆಂಕಟ್ರಾಜ್ ಅವರ ‘ಮಾಯಕದ ಸತ್ಯ’ದ ಓದು, ಚರ್ಚೆಯ ಕುರಿತು ‘ಅವಧಿ’ಯಲ್ಲಿ. – ಎನ್ ಸಂಧ್ಯಾರಾಣಿ

ಮಿತ್ರಾ ವೆಂಕಟ್ರಾಜು – ದೂರದ ಮುಂಬೈನಲ್ಲಿದ್ದೂ ತನ್ನ ತವರಿನ ಬೇರುಗಳನ್ನು, ಭಾಷೆಯನ್ನು, ಬಂಧವನ್ನು ಒಂದಿಷ್ಟೂ ಸಡಿಲಗೊಳಿಸಿಕೊಳ್ಳದ ಲೇಖಕಿ. ನನಗೆ ಮಿತ್ರಾ ವೆಂಕಟ್ರಾಜು ಅವರ ಪರಿಚಯವಾದದ್ದು ಇತ್ತೀಚಿಗೆ, ’ನೀನು ಅವರನ್ನು ಓದಲೇಬೇಕು’ ಎಂದು ನನ್ನ ಸ್ನೇಹಿತ ಅವರ ’ಮಾಯಕದ ಸತ್ಯ’ ಮತ್ತು ’ಪಾಚಿ ಕಟ್ಟಿದ ಪಾಗಾರ’ ನನ್ನ ಕೈಗಿಟ್ಟ ಘಳಿಗೆಯಲ್ಲಿ ನನ್ನೆದುರಿಗೆ ಹೀಗೆ ಒಂದು ಸಂವೇದನಾಶೀಲ ಜಗತ್ತು ನಿರಾವರಣಗೊಳ್ಳುವುದು ಎನ್ನುವ ಅರಿವು ನನಗಿರಲಿಲ್ಲ.

ಮೊದಲು ನಾನು ಓದಿದ್ದು ’ಮಾಯಕದ ಸತ್ಯ’. ಎಂತಹ ಜಗತ್ತು ಅದು … ಹೆಣ್ಣಿನ ಮನಸ್ಸನ್ನು ಹೀಗೂ ಎಳೆ ಎಳೆಯಾಗಿ ಬಿಡಿಸಿಡಬಹುದಾ, ಅದೂ ಇಷ್ಟು ಗಟ್ಟಿಯಾಗಿ, ಎಲ್ಲೂ ಜಾಳಾಗದಂತೆ, ನೇರ ನಮ್ಮೆದೆಯೊಳಕ್ಕೆ ಅವರೆಲ್ಲಾ ನಡೆದು ಬರುವಂತೆ…

’ಈ ಹೊತ್ತಿಗೆ’ಯಲ್ಲಿ ಈ ಸಲದ ಪುಸ್ತಕ ಮಿತ್ರಾ ರವರ ’ಮಾಯಕದ ಸತ್ಯ’ ಎಂದು ಘೋಷಿತವಾದಾಗ ನನಗೆ ಖುಷಿಯಾಗಿದ್ದು ಸುಳ್ಳಲ್ಲ. ಆ ಎಲ್ಲಾ ಕಥೆಗಳನ್ನು ಈ ನೆಪದಿಂದ ಮತ್ತೊಮ್ಮೆ ಓದಬಹುದಲ್ಲಾ ಅನ್ನುವ ಖುಷಿ ಅದು.

ಈ ಸಂಕಲನದಲ್ಲಿ ಒಟ್ಟು ೮ ಕಥೆಗಳಿವೆ. ಎಲ್ಲಾ ಕಥೆಗಳೂ ಹೆಣ್ಣಿನ ಮನಸ್ಸಿನ ವ್ಯಾಪಾರವನ್ನು, ಭಾವ ಲೋಕವನ್ನು ನಮ್ಮೆದುರಲ್ಲಿ ಯಾವುದೇ ಭಾವಾವೇಗವಿಲ್ಲದೆ, ಗೊಂದಲವಿಲ್ಲದೆ ಬಿಡಿಸಿಡುತ್ತಾ ಹೋಗುತ್ತವೆ. ಎಲ್ಲದರ ವಸ್ತು, ವ್ಯಾಪ್ತಿ ಭಿನ್ನವಾಗಿದೆ.

ಮೊದಲ ಕಥೆ ’ಹಾಡೊಂದರ ಗುಂಗು’. ತನ್ನ ಮೇಲ್ ಮಧ್ಯಮ ವರ್ಗದ ದಕ್ಷಿಣ ಮುಂಬೈನಿಂದ ಮದುವೆಯಾಗಿ, ಮಧ್ಯಮ ವರ್ಗದ ಜನರ ನಡುವೆ ಬಾಳಲು ಬರುವ ಹರ್ಷಿತಾ ರಾಜೆ ಸುಂದರಿ, ತವರಿನಲ್ಲಿ, ಕಾಲೇಜಿನಲ್ಲಿ ತನ್ನ ಸೌಂದರ್ಯದಿಂದ, ಚುರುಕುತನದಿಂದ, ಹಾಡುಗಾರಿಕೆಯಿಂದ ಹತ್ತು ಜನರ ನಡುವೆ ಎದ್ದು ಕಾಣುವ ವ್ಯಕ್ತಿತ್ವದವಳು. ಮೆಚ್ಚಿ ಮದುವೆಯಾದ ಕುಮಾರ್ ಜೊತೆ ಅವಳಿಗೆ ಕೈ ಎತ್ತಿ ತೋರಿಸಬಹುದಾದ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅವಳ ಜೀವನದಲ್ಲಿ ಯಾವುದೇ ಕಷ್ಟವಿಲ್ಲ. ಆದರೆ ಅವಳ ಮನಸ್ಸು ಬಯಸುವುದು ಗಂಡನ ಸಾಮಿಪ್ಯವನ್ನು, ಆದರೆ ತನ್ನ ಕೆಲಸದಲ್ಲಿ ವ್ಯಸ್ತನಾದ ಕುಮಾರ ಅವಳಿಗೆ ಮೊದಲಿನಂತೆ ಸಮಯ ಕೊಡಲಾರ. ಅವಳು ಕ್ರಮೇಣ ಒಂದು ಭ್ರಾಮಕ ಲೋಕದಲ್ಲಿ ಕಳೆದುಹೋಗುತ್ತಾ ನಡೆಯುತ್ತಾಳೆ. ಅಲ್ಲಿ ಅವಳಿಗೆ ಒಬ್ಬ ಆರಾಧಕ ಇದ್ದಾನೆ, ಆದರೆ ಅವಳಲ್ಲಿನ ಮೌಲ್ಯಗಳು ಪತಿಯನ್ನು ಬಿಟ್ಟು ಇನ್ನೊಬ್ಬನ ಮೆಚ್ಚಿಗೆಯನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ. ಅವಳ ಈ ಸುಪ್ತ ಮನಸ್ಸಿನ ಹೋರಾಟ ಕಡೆಗೆ ಅವಳನ್ನು ಮಾನಸಿಕ ತಜ್ಞರ ಹೊಸ್ತಿಲಿಗೆ ತಂದು ನಿಲ್ಲಿಸುತ್ತದೆ. ಅವಳ ಹುಡುಕಾಟ ಕಡೆಗೂ ಅವಳ ಗಂಡನಿಗೆ ಅರ್ಥವಾಗುವುದೇ ಇಲ್ಲ.

’ಬಿಳಿ ನೈಲಾನ್ ಸೀರೆ’ ಒಂದು ಮುಗ್ಧ ಮನಸ್ಸು ಹೇಗೆ ತನಗೇ ಅರಿವಿರದಂತೆ ಹೊರ ಜಗತ್ತು ತನ್ನ ಮೇಲೆ ಅರೋಪಿಸಿದ ಸಂಬಂಧವನ್ನು ಒಪ್ಪಿಕೊಂಡು, ಅದನ್ನು ತನಗೇ ಗೊತ್ತಿಲ್ಲದಂತೆ ಬೆಳೆದ ಮೇಲೂ ಪೋಷಿಸಿಕೊಳ್ಳುತ್ತಾ ಹೋಗುತ್ತದೆ ಎನ್ನುವುದು ಇಲ್ಲಿನ ವಸ್ತು. ಎದಿರು ಮನೆಯ ಹಿರಿಯ ಹುಡುಗಿ ತನ್ನನ್ನು ಗಂದ ಎಂದು ಚುಡಾಯಿಸುವುದು ಇಲ್ಲಿ ಬಾಲಕನಿಗೆ ಹಿಂಸೆ, ಆದರೆ ಅಷ್ಟೇ ನಿಜ ಅವನು ಅವಳ ಆ ಕರೆಗಾಗಿ ಕಾಯುವುದು! ಅವಳಿಗೆ ಮದುವೆಯಾದಾಗ ಬಿಳಿಸೀರೆಯಲ್ಲಿ ದೇವತೆಯಂತೆ ಕಾಣುತ್ತಿದ್ದ ಅವಳ ಆಚಿತ್ರ ಮಾತ್ರ ಅವನ ಕಣ್ಣಲ್ಲಿ ನೆಟ್ಟುಬಿಟ್ಟಿರುತ್ತದೆ. ಅವಳನ್ನು ಮತ್ಯಾವಾಗ ನೋಡಿದರೂ ಅವಳ ಬಿಂಬ ಮನದಲ್ಲಿ ಇಳಿಯುವುದೇ ಇಲ್ಲ. ಅವಳನ್ನು ಸುರಿಯುವ ಮಳೆಯಲ್ಲಿ ರಾತ್ರಿ ಇಡೀ ಹೊರಗೆ ನಿಲ್ಲಿಸಿದ ಅವಳ ಮೆಕ್ಯಾನಿಕ್ ಗಂಡನನ್ನು ಮತ್ಯಾವುದೋ ಕಾರಣಕ್ಕೆ ಹೊಡೆದು ಬಂದು, ಮನೆಯವರು ಕಾರಣ ಕೇಳಿದಾಗ, ’ನೀವೇ ಅಲ್ಲವ ಹೇಳಿದ್ದು ಅವನು ರೋಸಿಯನ್ನು ಹೊಡೆಯುತ್ತಾನೆ’ ಅಂತ ಅಂದು ಮನೆಯವರನ್ನೆಲ್ಲಾ ನಿಬ್ಬೆರಗಾಗಿಸುತ್ತಾನೆ! ಆದರೆ ಅದೇ ಕಥೆಯಲ್ಲಿ ಮತ್ತೊಂದು ಕಥೆಯಿದೆ, ಮನೆಯ ಹಿರಿ ಮಗಳು ಮನೆಯ ಜವಾಬ್ದಾರಿ ವಹಿಸಿಕೊಂಡು ತಾನು ಮದುವೆಯಾಗದೇ ತಂಗಿಯರ ಮದುವೆ ಮಾಡಲು ಮುಂದಾಗುತ್ತಾಳೆ. ಆದರೆ ಅದೇ ಸಮಯಕ್ಕೆ ಅವರಿಗೆ ಯಾವುದೇ ಒಳ್ಳೆಯ ಸಂಬಂಧ ಬಂದರು ತಪ್ಪಿಸುತ್ತಾಳೆ, ಕಥೆಯೊಳಗಿನ ಕಥೆಯಾಗದ ಕಥೆ ಇದು.

ಈ ಕಥಾಸಂಕಲನದಲ್ಲಿ ಅತ್ಯಂತ ಸೂಕ್ಷ್ಮವಾಗಿ, ಆ ಕಾಲಕ್ಕೆ ಅತ್ಯಂತ ಬೋಲ್ಡ್ ಎಂದು ಹೇಳಬಹುದಾದ ಕಥೆ ’ಹೂವಿನ ಪೂಜೆ’. ಎರಡು ಹೆಣ್ಣುಗಳ ನಡುವಿನ ಲೆಸ್ಬಿಯನ್ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ, ಸಂಯಮದಿಂದ ಹೇಳುವ ಮಿತ್ರಾ ಎಲ್ಲೂ ಅದು ಅಶ್ಲೀಲವಾಗದಂತೆ ಎಚ್ಚರ ವಹಿಸುತ್ತಾರೆ. ಸುಮಾರು ಎರಡೂವರೆ ವರ್ಷ ಅವರ ಮನದಲ್ಲಿ ಮಾಗಿ ಹೊರ ಬಂದ ಕಥೆ ಇದು. ಇಲ್ಲಿನ ಸಂಧರ್ಭಕ್ಕೆ ತಕ್ಕಂತೆ ರಾಜಿಯ ಕಥೆಯನ್ನು ಸೂಚ್ಯವಾಗಿ ಹೇಳುವ ಮಿತ್ರಾ, ಎಲ್ಲಿ ಅದನ್ನು ವಾಚ್ಯವಾಗಿಸಬೇಕೋ ಅಲ್ಲಿ ವಿದೇಶದ ಆವರಣದ, ಅಲ್ಲಿನ ಬದುಕಿನ ನೆರವು ತೆಗೆದುಕೊಳ್ಳುತ್ತಾರೆ. ಅಲ್ಲಿ ಬ್ರಿಜೆಟ್ ಮತ್ತು ಜೂಡಿ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ನಡುವಿನ ಸಂಬಂಧವನ್ನು ಒಪ್ಪಿಕೊಂಡು ಜೊತೆಯಲ್ಲಿ ಬದುಕುತ್ತಿರುತ್ತಾರೆ, ಆದರೆ ಇಲ್ಲಿ ರಾಜಿ ಮತ್ತು ಶ್ಯಾಮಿಲಿ ತಮ್ಮ ಮನಸ್ಸಿನಲ್ಲಿದ್ದುದನ್ನು ಧೈರ್ಯವಾಗಿ ಹೇಳಲಾಗದೆ, ಸಮಾಜವನ್ನು ಒಪ್ಪಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಡೀ ಕಥೆ ನಡೆಯುವುದು ನಿರೂಪಕಿಯ ಬಾಲ್ಯ ಮತ್ತು ಯೌವನದಲ್ಲಿ. ಹಾಗಾಗಿ ಅವಳು ಬಾಲ್ಯದಲ್ಲಿ ಕಂಡ ರಾಜಿ-ಶ್ಯಾಮಲಿಯ ಸಂಬಂಧ ಸೂಚ್ಯವಾಗಿ, ಬ್ರಿಜೆಟ್ ಮತ್ತು ಜೂಡಿಯ ಸಂಬಂಧ ಅವಳ ಅರಿವಿಗೆ ತಾಕಿದಂತೆ ಇಲ್ಲಿ ಕಾಣುತ್ತದೆ.

’ಮಾಯಕದ ಸತ್ಯ’ ಕಥೆ ತನ್ನ ತಂತ್ರಗಾರಿಕೆಯಿಂದ ಅಕಿರೋ ಕುರಸೋವೋನ ರಶೋಮನ್ ಕಥೆಯನ್ನು ನೆನಪಿಸುತ್ತದೆ. ಇಲ್ಲಿ ಒಂದು ಹೆಣ್ಣಿನ ಸಾವು ಆಗಿದೆ, ಅವಳ ರೂಪ, ಸೌಂದರ್ಯ ಸಹ ಅದಕ್ಕೆ ಒಂದಲ್ಲ ಒಂದು ರೀತಿ ಕಾರಣವಾಗಿ ಹೆಣೆದುಕೊಂಡಿದೆ. ಆದರೆ ಆ ಸಾವು ಅಲ್ಲಿದ್ದ ಮೂರು ಜನರ ಮನಸ್ಸಿನಲ್ಲಿ ಮೂರು ಕಥೆಯಾಗಿ ಉಳಿದುಕೊಂಡಿದೆ. ’ಕತಿ ಯಾರ ಕೈಯ್ಯಲ್ಲುಂಟ ಅವರು ಹೇಳಿದ್ದೇ ಕತಿಯಾ ಹಾಂಗಾರೆ?’ ಎಂದು ಕಥೆಯ ಒಬ್ಬ ಕಥೆಗಾರ್ತಿ ಗುಳ್ಳಿ ಕೇಳುವ ಹಾಗೆ ಕಥೆ ಅಲ್ಲಿದ್ದ ಮೂವರ ಕೈಯಲ್ಲಿ ಮೂರು ರೀತಿಯಾಗಿ ಪರಿವರ್ತನೆಗೊಳ್ಳುತ್ತದೆ.

ಈ ಹೊತ್ತಿಗೆಗೆ ಬಂದಿದ್ದ ಮಿತ್ರಾ ವೆಂಕಟ್ರಾಜು ಅವರ ತಂಗಿ ಕಾಂತಿ ಮತ್ತು ಅವರ ತಂಗಿಯ ಪತಿ ಅರವಿಂದ ಅವರು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಚರ್ಚೆಯಲ್ಲಿ ಭಾಗವಹಿಸಿದ ಅರವಿಂದ ಅವರು, ’ಅಲ್ಲ ಹಾಗಾದರೆ ಈ ಕಥೆಗೆ ನೀವ್ಯಾರಾದರೂ ನಾಲ್ಕನೆಯ ಸ್ವರೂಪ ಕೊಡಬಹುದಾ’ ಎಂದು ಕೇಳಿದಾಗ ಅಲ್ಲಿದ್ದವರ ಮನಸ್ಸಲ್ಲಿ ಕಥೆಯ ಸತ್ಯವತಿ ಹೊಸದಾಗಿ ಕಾಣಿಸತೊಡಗಿದ್ದು ಸುಳ್ಳಲ್ಲ!

ಈ ಕಥಾಸಂಕಲನದಲ್ಲಿ ಇನ್ನೂ ನಾಲ್ಕು ಕಥೆಗಳಿವೆ. ಎಲ್ಲವೂ ಹೀಗೆ. ಓದಿದಷ್ಟೂ ಹೊಸ್ ಹೊಸ ಹೊಳಹುಗಳನ್ನು ಕೊಡುತ್ತಾ ಹೋಗುತ್ತವೆ. ಇಲ್ಲಿನ ಹದ್ದಿನ ನೆರಳಲ್ಲಿ ಕಥೆ ಮಿತ್ರಾ ಅವರ ಪಾಚಿ ಕಟ್ಟಿದ ಪಾಗಾರ ಕಾದಂಬರಿಯಲ್ಲಿ ಇನ್ನೂ ವಿಸ್ತೃತವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಕಥೆಯಲ್ಲಿ, ಕಥಾವಸ್ತುವಿನಲ್ಲಿ, ಮಾನವೀಯ ಸಂಬಂಧಗಳಲ್ಲಿ, ಅವು ತಳೆಯಬಹುದಾದ ರೂಪಗಳಲ್ಲಿ ಆಸಕ್ತಿ ಇರುವವರೆಲ್ಲಾ ಓದಲೇ ಬೇಕಾದ ಪುಸ್ತಕ ಮಾಯಕದ ಸತ್ಯ.