❤

ಈ ಹೊತ್ತಿಗೆ ಆರಂಭಗೊಂಡು ನಿನ್ನೆಗೆ ಹತ್ತು ವರುಷಗಳಾದವು. 2013, ಫೆಬ್ರವರಿ 10ರಂದು ಕೆ ವಿ ಅಯ್ಯರ್ ಅವರ ‘ರೂಪದರ್ಶಿ’ ಕಾದಂಬರಿಯನ್ನು, ಹೆಚ್ ಸಿ ಶ್ರೀನಿವಾಸ್ ಅವರ ‘ಸಿರಿ ಸಂಪಿಗೆ’ಯಲ್ಲಿ ಓದುಗರೆಲ್ಲ ಸೇರಿ ಚರ್ಚಿಸುವುದರ ಮೂಲಕ ಆರಂಭಗೊಂಡ ಈ ಹೊತ್ತಿಗೆಯ ಪಯಣಕೆ ಹತ್ತು ವಸಂತಗಳನ್ನು ಕಂಡ ಹರುಷವಿದೆ.

ಈ ಹತ್ತು ವರ್ಷದಲ್ಲಿ ಅದೆಂತೆಂಥಾ ಮೇಧಾವಿಗಳೆಲ್ಲ ನಮ್ಮ ಈ ಹೊತ್ತಿಗೆಯ ಕರೆಗೆ ಓಗೊಟ್ಟು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ತಮ್ಮ ಜ್ಞಾನವನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದಾರೆ, ತೀರ್ಪುಗಾರರಾಗಿ, ಪೂರ್ವ ಆಯ್ಕೆ ಸಮಿತಿಯ ಸದಸ್ಯರಾಗಿ ಬಂದು ಸಹಕರಿಸಿದ್ದಾರೆ ಎನ್ನುವುದನ್ನು ನೆನೆದರೆ ಮನಸು ಸಾರ್ಥಕತೆಯಿಂದ ತೊನೆದಾಡುತ್ತದೆ.

ಇಲ್ಲಿಯವರೆಗೆ ಈ ಹೊತ್ತಿಗೆ ಕನ್ನಡ ಸಾಹಿತ್ಯದ 81 ಕೃತಿಗಳನ್ನು ಚರ್ಚಿಸಿದೆ. (ಕೊರೋನ ಅಡ್ಡಿಯಾಗದಿದ್ದರೆ ಈ ಸಂಖ್ಯೆ ಸುಲಭದಲ್ಲಿ 100 ಆಗುತ್ತಿತ್ತು!)

ಕಥಾ ಕಮ್ಮಟ, ವಿಮರ್ಶ ಕಮ್ಮಟ, ನಾಟಕಗಳ ಓದು, ಕವಿ ಗೋಷ್ಠಿಗಳು, ಪುಸ್ತಕಗಳ ಬಿಡುಗಡೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಮತ್ತು ಎಲ್ಲಾ ವಯೋಮನದವರಿಗಾಗಿ ಕಥಾ ಸ್ಪರ್ಧೆಗಳು, ಈ ಹೊತ್ತಿಗೆ ಕಥಾಪ್ರಶಸ್ತಿ, ಕಾವ್ಯ ಪ್ರಶಸ್ತಿ, ವರ್ಷಕ್ಕೊಮ್ಮೆ ಇಡೀ ದಿನದ ಹೊನಲು ಕಾರ್ಯಕ್ರಮ, ಅಲ್ಲಿನ ಅದ್ಭುತವಾದ ಗೋಷ್ಠಿಗಳು, ಚರ್ಚೆಗಳು, ಮಾಸ್ತಿ, ಎಂ. ಕೆ ಇಂದಿರಾ ಅವರಂಥಾ ಸಾಹಿತಿಗಳ ಶತಮಾನೋತ್ಸವ ಅರ್ಥಪೂರ್ಣ ಆಚರಣೆ, ಲಾಕ್ ಡೌನ್ ಟೈಮ್ ಲ್ಲಿ ಆನ್ಲೈನ್ ಮೂಲಕ ಕನ್ನಡದ 70 ಜನ ಕಥೆಗರ್ತಿಯರ ಕಥೆಗಳ ಚರ್ಚೆ, ವಿಶ್ಲೇಷಣೆ, ಅದೇ ಹೊತ್ತಲ್ಲಿ ನವರಾತ್ರಿಯ ವೇಳೆ ಒಂಬತ್ತು ದಿನಗಳ ಆನ್ಲೈನ್ ಕಾವ್ಯೋತ್ಸವ, ಅದರಲ್ಲಿ ನಾಲ್ಕು ಖಂಡಗಳಲ್ಲಿರುವ ಹಲವು ದೇಶಗಳ, ಐದು ರಾಜ್ಯ, ಕರ್ನಾಟಕದ ಒಂಬತ್ತು ಜಿಲ್ಲೆಗಳ ಕನ್ನಡದ ಸುಮಾರು 130-135 ಜನ ಕವಿಗಳು, ಹಾಡುಗಾರರು ಭಾಗವಹಿಸಿದ ಖುಷಿ ಎಲ್ಲವೂ ಈ ಹೊತ್ತಿಗೆಗೆ ಒಂದು ಧನ್ಯತೆಯನ್ನು ಒದಗಿಸಿವೆ. ವಿವಿಡ್ ಲಿಪಿ ತಂಡದ ಸಹಕಾರದಿಂದಾಗಿ ಈ ಹೊತ್ತಿಗೆ ತನ್ನ ಕಾರ್ಯಕ್ರಮವನ್ನು ಆನ್ಲೈನ್ ಪ್ರಸಾರ ಮಾಡುವ ಮೂಲಕ ಜಗತ್ತಿನ ಎಲ್ಲೆಡೆ ಇರುವ ಕನ್ನಡ ಸಾಹಿತ್ಯಸಕ್ತರನ್ನು ಏಕಕಾಲದಲ್ಲಿ ತಲುಪಿದ ಮೊದಲ ಸಾಹಿತ್ಯ ವೇದಿಕೆ ಎಂಬ ಹೆಮ್ಮೆ ನಮ್ಮ ಈ ಹೊತ್ತಿಗೆಯದು.

ಯಾವುದೇ ಸಂಘಟನೆಯ ಕೆಲಸ ಯಾರೋ ಒಬ್ಬರಿಂದ ಆಗುತ್ತದೆ ಎಂದರೆ ಅದು ಸಾಧ್ಯವಿಲ್ಲದ ಮಾತು. ಚುಕ್ಕಾಣಿಯನ್ನು ಹಿಡಿದು ನಡೆಸುವವರು ಒಬ್ಬರಿರಬಹುದು. ಆದರೆ ಅದರ ಹಿಂದೆ ಹಲವಾರು ಜನರ ಕೈಗಳು ಸಹಕರಿಸುತ್ತವೆ. ಅವರೆಲ್ಲರ ಸಹಕಾರದಿಂದಲೇ ಇಂಥವೆಲ್ಲ ಕೆಲಸಗಳು ನೆರವೇರುವುದು. ಅಂಥ ಒಂದಿಷ್ಟು ಜನ ಸತತ ಈ ಹೊತ್ತಿಗೆಯವರಾಗಿ ಕೆಲಸ ಮಾಡುತ್ತಾ, ಧನ ಸಹಾಯವನ್ನೂ ಮಾಡುತ್ತಿರುವುದರಿಂದಾಗಿಯೇ ಈ ಹತ್ತು ವರುಷಗಳ ನಡಿಗೆ ಸಾಧ್ಯವಾಗಿದೆ. ಮುಂದೆ ಏನೆಲ್ಲಾ ಸಾಧ್ಯವಾಗುವುದೋ ಅದಕ್ಕೂ ಕಾರಣ ಈ ಎಲ್ಲ ಜೀವಗಳ ಒತ್ತಾಸೆ ಮತ್ತು ಬೆಂಬಲದಿಂದಲೇ.

ಇಂದು ಅಂಥಾ ನನ್ನ ಎಲ್ಲ ಆಪ್ತ ಜೀವಗಳಿಗೂ ಅಭಿವಂದನೆಗಳು.🙏🏽❤